Are we loosing our precious cultural heritage by neglecting our languages

ಭಾಷೆಯ ಅವನತಿಯೊಂದಿಗೆ ಸಂಸ್ಕೃತಿಯ ಅವನತಿ!

 “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ”

ತಾಯಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮೇಲು ಎಂಬ ಮಾತು ನಮ್ಮೆಲ್ಲರ ಮನ-ಮನೆಗಳಲ್ಲಿ ಪ್ರಚಲಿತವಾಗಿರುವ ನಾಣ್ಣುಡಿ. ಇದೇ ಜನನಿ ಮತ್ತು ಜನ್ಮಭೂಮಿಯ ಮಹತ್ವ, ಆಕೆಯ ನಡೆ-ನುಡಿ, ಆಚಾರ-ವಿಚಾರ, ರೀತಿ-ರಿವಾಜು, ಸಂಪ್ರದಾಯ-ಪರಂಪರೆ ಹಾಗೂ ಜ್ಞಾನಕೋಶಗಳ ಭಂಡಾರ ಜನನಿಯ ಭಾಷೆಯಲ್ಲಿ ಹುದುಗಿದೆ ಎಂಬುದು ಸತ್ಯವಾದ ಮಾತು. ಆದರೆ ಆ ಮಾತೃಭಾಷೆಯನ್ನು ಉಳಿಸಿ ಬೆಳೆಸಿ, ಮುಂದಿನ ಸಂತತಿಗೆ ಪೂರ್ಣ ಸಂಸ್ಕೃತಿಯನ್ನೇ ರವಾನಿಸುವ ಜವಾಬ್ದಾರಿಯೂ ಅಷ್ಟೇ ಮುಖ್ಯ.

 ಭಾಷೆ ಮತ್ತು ಸಂಸ್ಕೃತಿ ಮಾನವ ಜೀವನದ ಬಹುಮುಖ್ಯ ಅಂಗಗಳು. ಮಾನವ ಸಮಾಜ ಇಂದು ತನ್ನ ಅಸ್ತಿತ್ವ ಮತ್ತು ಉನ್ನತ ಸ್ಥಾನವನ್ನು ಈ ಭೂಮಿಯ ಮೇಲೆ ಸಾಧಿಸಿರುವುದು ಹಾಗೂ ಇತರ ಪ್ರಾಣಿವರ್ಗಗಳಿಗಿಂತ ಉನ್ನತ ಪೀಠವನ್ನಲಂಕರಿಸಿರುವುದು ತನ್ನ ಭಾಷಾಪ್ರಾವೀಣ್ಯ ಮತ್ತು ಸಂಪರ್ಕ ಮಾಧ್ಯಮಗಳ ಸಹಕಾರದಿಂದ. ಭಾಷೆಯಿಲ್ಲದ ಸಂಸ್ಕೃತಿ ಅರ್ಥವಿಲ್ಲದ ಕವನದಂತೆ. ಆದ್ದರಿಂದ ಇವೆರಡು ಒಂದೇ ನಾಣ್ಯದ ಎರಡು ಮುಖಗಳು. ಯಾವುದೇ ಸಂಸ್ಕೃತಿ ಮತ್ತು ಅದರ ಮಹತ್ವ ಕೇವಲ ಭಾಷೆಯೊಂದರ ಮೂಲಕ ಜನಸಮುದಾಯಕ್ಕೆ ಪರಿಚಿತವಾಗಲು ಸಾಧ್ಯ. ಸಂಸ್ಕೃತಿಯ ಎಲ್ಲಾ ಸೂಕ್ಷ್ಮತೆಗಳು, ವಿವಿಧ ಪರಂಪರೆಗಳು, ಸಾಧನೆಗಳು ಎಲ್ಲವೂ ಗುರುತಿಸಲ್ಪಡುವುದು ಆ ಸಂಸ್ಕೃತಿಯ ಆಧಾರದಿಂದ. ಭಾಷೆ ಸಂಸ್ಕೃತಿಯ ಅವಿಭಾಜ್ಯ ಅಂಗ. ಆಧುನಿಕ ಪ್ರಪಂಚದ ವಹಿವಾಟುಗಳೆಲ್ಲಾ ಭಾಷೆಗಳ ಆಧಾರದಿಂದಲೇ ಜನಜನಿತವಾಗಿವೆ. ಈ ಭೂಮಿಯ ಮೇಲಿನ ವಿವಿಧ ದೇಶಗಳಲ್ಲಿನ ಜನಜೀವನ, ವಿವಿಧ ಪರಂಪರೆ, ಸಮಾಜದ ರೂಢಿ ಮತ್ತು ನಿಯಮಗಳು ಒಬ್ಬರಿಂದ ಮತ್ತೊಬ್ಬರಿಗೆ ಪರಿಚಿತವಾಗಿರುವುದು ಭಾಷೆಗಳ ಮಾಧ್ಯಮದಿಂದಲೇ. ಭಾಷೆಯ ಮತ್ತೊಂದು ಮುಖವೇ ಪ್ರಸಾರ ಮಾಧ್ಯಮ. ಈ ಪ್ರಸಾರ ಮಾಧ್ಯಮವೇ ಈ ಪ್ರಪಂಚದ ಅಸಲಿ ಬಂಡವಾಳ. ಮಾನವ ಈ ಭೂಮಿಯ ಇತರ ಜೀವಿಗಳಿಗಿಂತ ಅನೇಕ ಪಟ್ಟು ತನ್ನ ಜೀವನವನ್ನು ಉತ್ತಮಗೊಳಿಸಿ, ಈ ಜಗತ್ತಿನಲ್ಲಿ ತನ್ನ ಸಾರ್ವಭೌಮತ್ವವನ್ನು ಸಾಧಿಸಿರುವುದು ಭಾಷೆ ಮತ್ತು ಸಂಪರ್ಕ ಮಾಧ್ಯಮದ ಬಲದಿಂದ.

 ನಮ್ಮ ಹಿರಿಯರು ತಮ್ಮ ಕಾಲದ ನಡೆ-ನುಡಿ, ಸಂಪ್ರದಾಯ ಮತ್ತು ಜೀವನಶೈಲಿಗಳನ್ನು ಮುಂದಿನ ಪೀಳಿಗೆಗೆ ಬೋಧಿಸಿ ಆ ಪರಂಪರೆಗಳನ್ನು ಮುಂದುವರೆಸುವಂತೆ ಸಾಧ್ಯವಾಗಿರುವುದು ಭಾಷೆಯೊಂದರ ಮಾಧ್ಯಮದಿಂದ. ನನ್ನ ಅಜ್ಜ-ಅಜ್ಜಿ, ಅಪ್ಪ-ಅಮ್ಮಂದಿರು ತಮ್ಮ ಬಾಲ್ಯದ ಲೀಲೆಗಳು ಮತ್ತು ಮಹತ್ವದ ವಿಷಯಗಳನ್ನು ನಮ್ಮೊಡನೆ ಹಂಚಿಕೊಂಡಿರುವುದು ಕೇವಲ ಭಾಷೆಯ ಸಹಾಯದಿಂದ. ಹೀಗಾಗಿ ಈ ಜಗತ್ತಿನಲ್ಲಿ ಭಾಷೆಯ ಸ್ಥಾನವನ್ನು ಇನ್ನಾವ ಸಾಮಗ್ರಿಯೂ ಕಬಳಿಸಲಾಗದು. ಇಂತಹ ಭಾಷೆಯ ಬೆಳವಣಿಗೆಗೆ ಕಾರಣರಾದ ನಮ್ಮ ಪೂರ್ವಜರು ನಿಜಕ್ಕೂ ಬುದ್ಧಿಶಾಲಿಗಳು. ಇಂದು ಈ ಜಗತ್ತಿನಲ್ಲಿ ೬೦೦೦ಕ್ಕೂ ಹೆಚ್ಚಿನ ಭಾಷೆಗಳು ಪ್ರಚಲಿತವಾಗಿವೆ.  ಹಲವಾರು ಭಾಷೆಗಳು, ವಿವಿಧ ಕಾಲದಲ್ಲಿ ಉತ್ಕೃಷ್ಟ ಸ್ಥಾನದಲ್ಲಿದ್ದವು. ಹಾಗೆಯೇ, ಇನ್ನೂ ಕೆಲವು ಈಗಲೂ ಆ ಸ್ಥಾನದಲ್ಲಿ ಉಳಿದಿವೆ. ಈ ಎಲ್ಲ ಭಾಷೆಗಳೂ ಮತ್ತು ಅವುಗಳ ಉಚ್ಚ ಹಾಗು ನೀಚ ಸ್ಥಾನಗಳು ಆಯಾಯ ಕಾಲದ ಬಂದಿ. ಉದಾಹರಣೆಗೆ, ಫ಼್ರಾನ್ಸ್ ದೇಶದ ಫ಼್ರೆಂಚ್ ಭಾಷೆ ೧೭ ನೆಯ ಶತಮಾನದಿಂದ ೨೦ ನೆಯ ಶತಮಾನದ ಮಧ್ಯ ಭಾಗದವರೆಗೆ ಜಗತ್ತಿನ ಉಚ್ಚ ಶಾಸ್ತ್ರೀಯ ಭಾಷೆಯಾಗಿ, ಯೂರೋಪಿನ ಜನತೆಯ ಅದರಲ್ಲೂ ಉನ್ನತ ಶಿಕ್ಷಿತ ವರ್ಗದ ಉಸಿರಾಗಿತ್ತು. ಆದರೆ, ಎರಡನೆಯ ಮಹಾಯುದ್ಧದ ನಂತರ ಆದ ಜಾಗತಿಕ ಬೆಳವಣಿಗೆ ಮತ್ತು ಅಮೆರಿಕ ದೇಶದ ಉನ್ನತಿ, ಆಂಗ್ಲ ಭಾಷೆಯನ್ನು ಆ ಸ್ಥಾನಕ್ಕೇರಿಸಿತು. ಇದಲ್ಲದೆ, ಆಂಗ್ಲರ ೩೦೦-೫೦೦ ವರ್ಷಗಳ ಜಾಗತಿಕ ಆಧಿಪತ್ಯದ ಕಾರಣದಿಂದ, ಪ್ರಪಂಚದ ಅರ್ಧಕ್ಕಿಂತ ಹೆಚ್ಚು ದೇಶಗಳಲ್ಲಿ ಆಂಗ್ಲ ಭಾಷೆ ಪ್ರಮುಖ ಸ್ಥಾನಕ್ಕೇರಿತಲ್ಲದೇ, ಇಂದೂ ಜಗತ್ತಿನಲ್ಲಿ ಇತರ ಭಾಷೆಗಳಿಗಿಂತ ಹೆಚ್ಚಿನ ಬಳಕೆಯಲ್ಲಿದೆ. ಸದ್ಯಕ್ಕೆ ಜಗತ್ತಿನ ವಿಜ್ಞಾನ, ಶಿಕ್ಷಣ ಹಾಗೂ ವ್ಯಾಪಾರ ವ್ಯವಹಾರಗಳೆಲ್ಲ ಹೆಚ್ಚುಕಡಿಮೆ ಆಂಗ್ಲ ಭಾಷೆಯಲ್ಲೆ ನಡೆಯುತ್ತಿದೆ. ಆಂಗ್ಲ ಭಾಷೆಯ ಈ ಸುವರ್ಣಯುಗ ಎಷ್ಟು ಕಾಲ ಇರುವುದೋ ಕಾಣೆವು! ಆಂಗ್ಲ ಭಾಷೆಯ ಬಳಕೆ ಮತ್ತು ಜನಪ್ರಿಯತೆಗೆ ಹಲವಾರು ಕಾರಣಗಳಿವೆ. ಒಂದು ಕಾಲದಲ್ಲಿ ಆಂಗ್ಲರ ರಾಜ್ಯಭಾರ ಪ್ರಪಂಚದ ಅರ್ಧದಷ್ಟು ಭಾಗವನ್ನಾಕ್ರಮಿಸಿದ್ದ ವಿಷಯ ಮೊದಲನೆಯ ಕಾರಣ. ಆಂಗ್ಲರು ತಮ್ಮ ಆಧಿಪತ್ಯವನ್ನು ಬಿಟ್ಟರೂ, ಅವರ ಭಾಷೆ ಅಷ್ಟರಲ್ಲಿ ಆ ದೇಶಗಳ ಮೂಲಭಾಷೆಗಳನ್ನು ಬಹಳಷ್ಟು ಮಟ್ಟಿಗೆ ನುಂಗಿತ್ತು. ಅಲ್ಲದೆ, ಆಧುನಿಕ ಜಗತ್ತಿನ ಕೈಗಾರಿಕೆ, ತಂತ್ರಜ್ಞಾನ, ವಿಜ್ಞಾನದ ಬೆಳವಣಿಗೆ, ಶಿಕ್ಷಣಗಳೆಲ್ಲವೂ ಆಂಗ್ಲ ಭಾಷೆಯ ಮಾಧ್ಯಮದಲ್ಲಿ ನಡೆಯಲಾರಂಭಿಸಿ, ಈಗ ನಾವೆಲ್ಲ ಈ ಭಾಷೆಯ ಗುಲಾಮರಾಗಿ ವರ್ತಿಸಬೇಕಾದ ಪರಿಸ್ಥಿತಿ ಬಂದಿದೆ. ಎಲ್ಲಕ್ಕಿಂತ ಆಂಗ್ಲ ಭಾಷೆ ತನ್ನ ಸಹನೆ ಮತ್ತು ಸಹಿಷ್ಣುತೆಯ ಕಾರಣದಿಂದ, ಎಲ್ಲಾ ದೇಶಗಳ ಅನೇಕಾನೇಕ ವೈವಿಧ್ಯಗಳನ್ನು ಅಳವಡಿಸಿಕೊಂಡು, ಸಂಪ್ರದಾಯಕ್ಕೆ ಸಿಕ್ಕಿಕೊಳ್ಳದೆ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿ ಈಗ ತನ್ನ ಉತ್ಕೃಷ್ಟ ಸ್ಥಾನದಲ್ಲಿದೆ. ಆದರೂ ಸಹ, ಈಗಾಗಲೇ ಅಮೆರಿಕಾ ಸಂಯುಕ್ತ ಸಂಸ್ಥಾನದಂತಹ ಬಲಶಾಲಿ ದೇಶವನ್ನು ನಿಧಾನವಾಗಿ ಆದರೆ ನಿಶ್ಚಿತವಾಗಿ ಸ್ಪಾನಿಷ್ ಭಾಷೆ ಕಬಳಿಸುತ್ತಿದೆ. ಆದ್ದರಿಂದ ಜಗತ್ತಿನ ಭಾಷೆಗಳಲ್ಲಿ ಯಾವುದು ಶ್ರೇಷ್ಠ, ಯಾವುದು ಕನಿಷ್ಠ ಎಂಬ ಮಾತು ಇಲ್ಲಿ ಮುಖ್ಯವಲ್ಲ. ಒಟ್ಟಿನಲ್ಲಿ ಪ್ರತಿ ಭಾಷೆ ಒಂದು ಸಂಸ್ಕೃತಿಯ ’ಶಿರ’ವಿದ್ದಂತೆ. ಈ ಶಿರವಿಲ್ಲದೇ ದೇಹವಿಲ್ಲ.

 ಆದರೆ ಇತ್ತೀಚೆಗೆ ಪ್ರಪಂಚದ ಎಲ್ಲೆಡೆಯಲ್ಲಿ ಪ್ರತಿದಿನವೂ ಹಲವಾರು ಭಾಷೆಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಿ ಕಡೆಯಲ್ಲಿ ನಶಿಸುವ ಪರಿಸ್ಥಿತಿಯಲ್ಲಿ ಸಿಲುಕಿ ತಮ್ಮ ಸಂಸ್ಕೃತಿಗೆ ಧಕ್ಕೆ ತಂದುಕೊಳ್ಳುತ್ತಿವೆ ಎಂಬ ಕಟುಸತ್ಯದ ಬಗ್ಗೆ ಪ್ರಪಂಚದ ಭಾಷಾಶಾಸ್ತ್ರಜ್ಞರು ದೊಡ್ಡ ಹಾಹಾಕಾರವನ್ನೆಬ್ಬಿಸಿದ್ದಾರೆ. ಮೊನ್ನೆ ತಾನೆ ಬಿ.ಬಿ.ಸಿ. ಅಂತರಜಾಲಾ ತಾಣದಲ್ಲಿ ಪ್ರಕಟವಾಗಿದ್ದ ಲೇಖನವೊಂದರ ಪ್ರಕಾರ, ಹಿಂದೂಮಹಾಸಾಗರದಲ್ಲಿರುವ ಅಂಡಮಾನ್ ದ್ವೀಪದಲ್ಲಿನ ಸುಮಾರು ೭೦,೦೦೦ ವರ್ಷಗಳಷ್ಟು ಹಳೆಯದಾದ ಭಾಷೆಯೊಂದನ್ನು ಬಲ್ಲ ಕಡೆಯ ಪ್ರಜೆಯ ನಿಧನ ಹೊಂದಿದ್ದಾನೆ. ಅಮೆರಿಕಾ ದೇಶದ ಅರಿಜೋನಾ ರಾಜ್ಯದಲ್ಲಿನ ಗಿರಿಜನ ಪಂಗಡದ ಅತ್ಯಂತ ಹಳೆಯ ಭಾಷೆಯನ್ನು ಬಲ್ಲ ಒಬ್ಬನೇ ಹಿರಿಯ ಪ್ರಜೆ ತನ್ನ ಭಾಷೆಯನ್ನು ಯಾರೊಡನೆಯೂ ಮಾತನಾಡದೆ, ಕೇವಲ ತನ್ನಲ್ಲಿ ತಾನೇ ಆಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂಬ ಗಂಭೀರ ವಿಷಯದ ಸುದ್ದಿ, ಹೀಗೆ ಇತ್ತೀಚಿನ ಬೆಳವಣಿಗೆಗಳು ಮಾನವ ಸಂಸ್ಕೃತಿಗೆ ಬಿದ್ದ ದೊಡ್ಡ ಪೆಟ್ಟು ಎಂದು ಪ್ರಖ್ಯಾತ ಭಾಷಾಶಾಸ್ತ್ರಜ್ಞ ಪ್ರೊಫ಼ೆಸರ್ ಹ್ಯಾರಿಸನ್ ಅವರ ಅಭಿಪ್ರಾಯ. ಹೀಗೆ ನಶಿಸುತ್ತಿರುವ ಭಾಷೆಗಳು ಯಾವುದೇ ದೇಶದ ಪ್ರಧಾನ ಭಾಷೆಗಳಲ್ಲದಿರಬಹುದು. ಆ ದೇಶಗಳ ಯಾವುದೋ ಮೂಲೆಯಲ್ಲಿ ವಾಸಿಸುವ ಗಿರಿಜನ, ಗುಡ್ಡಗಾಡಿನ ವರ್ಗಗಳಲ್ಲಿ ಪ್ರಚಲಿತವಾದ ಕೇವಲ ಆಡುಭಾಷೆಗಳಾಗಿರಬಹುದು. ಲಿಪಿಯಿಲ್ಲದ ಈ ಆಡುಭಾಷೆಗಳ ನಷ್ಟವೂ ಸಹ ನಮ್ಮ ಮಾನವ ಸಂಸ್ಕೃತಿಗೆ ಮಾರಕವಾಗಿ ಪರಿಣಮಿಸಬಹುದು. ಹೇಗೆಂದರೆ, ಈ ಪ್ರದೇಶಗಳ ಭೂಗೋಳ, ಹಿನ್ನೆಲೆ, ಸಸ್ಯಸಂಪತ್ತು, ಪ್ರಾಣಿಸಂಪತ್ತಿನ ಅಗಾಧ ಜ್ಞಾನವನ್ನು ಇಲ್ಲಿರುವ ಗಿರಿಜನ, ತಮ್ಮ ಆಡು ಭಾಷೆಗಳ ಮಾಧ್ಯಮದಲ್ಲಿ ಹಿಡಿದಿಟ್ಟಿದ್ದಾರೆ. ಆದ್ದರಿಂದ ಈ ಆಡು ಭಾಷೆಗಳ ಅಳಿವು, ಒಂದು ವಿಧದಲ್ಲಿ ಈ ಜನವರ್ಗಗಳ ಮುಂದಿನ ಪೀಳಿಗೆಯ ಅವಸಾನದಲ್ಲಿ ಮುಕ್ತಾಯವಾಗಬಹುದು.

 ಪ್ರೊಫ಼ೆಸರ್ ಹ್ಯಾರಿಸನ್ ಅಂತಹ ಭಾಷಾತಜ್ಞರು, ಸೈಬೀರಿಯಾದ ಕಾಡುಗಳಿಂದ ಹಿಡಿದು ಬೊಲಿವಿಯಾದ ಎತ್ತರದ ಪ್ರಸ್ಥಭೂಮಿಯವರೆಗೆ, ಮಿಚಿಗನ್ನಿನ ಮ್ಯಾಕ್ ಡೊನಾಲ್ಡ್ ಉಪಾಹಾರಗೃಹದಿಂದ, ಯೂಟಾದ ಟ್ರೈಲರ್ ಉದ್ಯಾನವನದ ಮೂಲೆಯವರೆಗೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರಾಂತ್ಯಗಳಲ್ಲಿ ನಶಿಸಿ ಹೋಗುತ್ತಿರುವ ಆಡುಭಾಷೆಯನ್ನು ಬಲ್ಲ, ಕಡೆಯ ಪ್ರಜೆಗಳನ್ನು ಭೇಟಿಯಾಗಿ, ಅವರ ಮನದಳಲನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಈ ನಶಿಸುತ್ತಿರುವ ಭಾಷೆಗಳಿಂದ ನಾವು ಇನ್ನೂ ಕಲಿಯಬೇಕಾಗಿರುವ ಅನೇಕ ವಿಷಯಗಳ ಮಹತ್ವದ ಬಗ್ಗೆ ಒತ್ತಿ ಹೇಳಿದ್ದಾರೆ. ಇಂತಹ ಗಿರಿಜನ ಪಂಗಡದ ಹಿರಿಯ ಪ್ರಜೆಗಳು, ಈ ಪ್ರಪಂಚದ ಅತ್ಯಂತ ಪ್ರತಿಕೂಲವಾದ ವಾತಾವರಣಗಳಲ್ಲಿ ಜೀವಿಸಿ, ಆ ಪ್ರತಿಕೂಲ ಪರಿಸರದಲ್ಲಿ ಪಾರಾಗಿ ಉಳಿಯುವ ಬಗ್ಗೆ ತಮಗಿರುವ ಜ್ಞಾನವನ್ನು ಈ ಅಳಿಯುತ್ತಿರುವ ತಮ್ಮ ಭಾಷೆಗಳಲ್ಲಿ ಸೆರೆಹಿಡಿದಿದ್ದಾರೆ. ಆದ್ದರಿಂದ, ಈ ಭಾಷೆಗಳು ಅಳಿದರೆ, ಒಂದು ಪೂರ್ಣ ಜ್ಞಾನಭಂಡಾರವೇ ಅಳಿಯುತ್ತದೆ. ಈ ಭಾಷೆಗಳ ನಾಶ, ಅವನ್ನು ಬಲ್ಲ ಈ ಗಿರಿಜನ ಸಂಸ್ಕೃತಿಯ ವಿನಾಶದೊಡನೆ ನೇರ ಸಂಭಂಧವನ್ನು ಹೊಂದಿದೆ ಎಂಬ ಕಹಿಸತ್ಯ ನಮ್ಮ ಮುಂದಿದೆ. ಭವಿಷ್ಯದಲ್ಲಿ ಉಂಟಾಗಬಹುದಾದ ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ತನ್ನ ಅಸ್ತಿತ್ವದ ಉಳಿವು, ಇಂತಹ ಭಾಷೆಗಳಲ್ಲಿ ಅಡಗಿರಬಹುದು ಎಂಬ ಮಹತ್ವದ ಸಂಗತಿಯನ್ನು ಮಾನವ ನಿರ್ಲಕ್ಷಿಸುತ್ತಿದ್ದಾನೆ. ೨೨ನೆಯ ಶತಮಾನದ ಆಧುನಿಕ ಮನುಷ್ಯ, ತನ್ನ ಸೈಬರ್ ಪ್ರಪಂಚದ ಸುಖ-ಸೌಕರ್ಯಗಳ ಹೊದ್ದಿಕೆಯೊಳಗೆ ಸೇರಿ, ತನ್ನ ಪೂರ್ಣ ಜ್ಞಾನದ ಬಗ್ಗೆ ತೃಪ್ತಿ ಹೊಂದಿದವನಾಗಿ, ಅಹಂಕಾರದಿಂದ ವರ್ತಿಸುತ್ತಿರುವುದು ದುರಂತವೇ ಸರಿ. ಹಲವು ಹತ್ತು ಸಹಸ್ರ ವರ್ಷಗಳ ಹಿಂದೆ, ಅಲೆಮಾರಿಯಾಗಿ ಬೇಟೆಗಾರನಾಗಿದ್ದ ಮಾನವ; ಮುಂದೆ ಇದೇ ರೀತಿ ಭಾಷೆಗಳ ಬಗ್ಗೆ ತನ್ನ ತಿರಸ್ಕಾರ ಭಾವನೆಯನ್ನು ಮುಂದುವರೆಸಿದರೆ; ವಿಜ್ಞಾನಿಗಳ ಭವಿಷ್ಯವಾಣಿಯಂತೆ ಮುಂದೆ ಈ ಗ್ರಹದಲ್ಲಿ ಉಂಟಾಗುವ ಪ್ರತಿಕೂಲ ಪರಿಸ್ಥಿತಿಗಳನ್ನೆದುರಿಸಲು ಅಸಮರ್ಥನಾಗಬಹುದು ಎಂಬುದು ಅನೇಕ ಭಾಷಾತಜ್ಞರ ಅಭಿಪ್ರಾಯ. ಇಂದು ಪ್ರಪಂಚದಲ್ಲಿ ಪ್ರತಿ ದಿನ ೨ ಭಾಷೆಗಳ ಸಾವನ್ನು ನಾವು ನೋಡುತ್ತಿದ್ದೇವೆ. ಸಧ್ಯಕ್ಕೆ ಜಗತ್ತಿನಲ್ಲಿರುವ ೬೦೦೦ಕ್ಕೂ ಮಿಕ್ಕು ಭಾಷೆಗಳಲ್ಲಿ, ಕೇವಲ ೬೦೦ ಭಾಷೆಗಳಿಗೆ ಮಾತ್ರಾ ಭವಿಷ್ಯವಿದೆ, ಉಳಿದೆಲ್ಲಾ ಭಾಷೆಗಳು ಕ್ರಮೇಣವಾಗಿ ಅವನತಿಯ ದಾರಿ ಹಿಡಿಯುತ್ತವೆ ಎಂಬುದು ತಜ್ಞರ ಅಭಿಪ್ರಾಯ. ನಾಗರಿಕತೆಯೊಂದರ ಪೂರ್ಣ ಜ್ಞಾನಭಂಡಾರವೆನಿಸಿದ ಭಾಷೆಯ ಅವನತಿಯಿಂದ ಮಾನವ ಜನಾಂಗ ತನ್ನ ವೈವಿಧ್ಯವನ್ನೇ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಈ ಭಾಷೆಗಳ ಅಸ್ತಿತ್ವ ನಮ್ಮ ಜನಾಂಗದ ದೊಡ್ಡ ಆಸ್ತಿ. ಭಾಷೆಗಳ ಬಗೆಗಿನ ಮಾನವನ ಈ ತಿರಸ್ಕಾರ ಧೋರಣೆ ಬದಲಾಗುವ ತನಕ, ಸಧ್ಯದ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುವ ಭರವಸೆಯಿಲ್ಲ.

 ಇತ್ತೀಚೆಗೆ ಯು.ಕೆ.ಕನ್ನಡ ಬಳಗದ ಸಾಂಸ್ಕೃತಿಕ ಹಬ್ಬಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಕರ್ನಾಟಕ ರಾಜ್ಯದ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ನಮಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರದ ಪ್ರಸ್ತಾಪ ಮಾಡಿದರು. ಅವರ ಅಭಿಪ್ರಾಯದಲ್ಲಿ, ಹೊರನಾಡ ಕನ್ನಡಿಗರು ಮತ್ತು ಇತರ ಅನಿವಾಸಿ ಭಾರತೀಯ ಮಾತಾ-ಪಿತೃಗಳಿಗೆ, ತಮ್ಮ ಮಾತೃಭಾಷೆಗಳನ್ನು ತಮ್ಮ ಮಕ್ಕಳಿಗೆ ಕಲಿಸಿ ಅದನ್ನು ಮುಂದಿನ ಪೀಳಿಗೆಗೆ ಜೀವಂತವಾಗಿಡುವ ಹಿರಿಯ ಜವಾಬ್ದಾರಿಯಿದೆ. ಆದರೆ, ಈ ದಿಶೆಯಲ್ಲಿ ಹೊರನಾಡ ಕನ್ನಡಿಗರು ಗಮನಾರ್ಹ ಪ್ರಗತಿ ಸಾಧಿಸಿದಂತೆ ಕಾಣುತ್ತಿಲ್ಲ. ಬಹುತೇಕ ಹೊರನಾಡ ಕನ್ನಡಿಗರ ಮಕ್ಕಳು ಕನ್ನಡ ಭಾಷೆಯಲ್ಲಿ ಮಾತನಾಡುವುದಿಲ್ಲ; ಹಾಗು ಕನ್ನಡದಲ್ಲಿ ಮಾತನಾಡಿಸಿದರೆ ಇಂಗ್ಲೀಷಿನಲ್ಲಿ ಉತ್ತರಿಸುವ ಸಂಪ್ರದಾಯವನ್ನು ರೂಢಿಯಲ್ಲಿ ಇಟ್ಟುಕೊಂಡಿದ್ದಾರೆ. ಇದಕ್ಕೆ ಕಾರಣ ಮಕ್ಕಳಲ್ಲ. ಅವರ ತಂದೆ-ತಾಯಿಯರು ಮೊದಲಿನಿಂದಲೆ ಆಸಕ್ತಿ ವಹಿಸಿ ತಮ್ಮ ತಾಯ್ನುಡಿಯನ್ನು ಕಟ್ಟುನಿಟ್ಟಾಗಿ ಕಲಿಸಿ ಬೆಳೆಸಿದರೆ; ಮಕ್ಕಳಿಗೆ ಖಂಡಿತ ನಮ್ಮ ಭಾಷೆಯಲ್ಲಿ ಅಭಿರುಚಿ ಮೂಡುತ್ತದೆ. ಇಲ್ಲಿ ನಮ್ಮ ಕನ್ನಡಿಗರ ನಿರಭಿಮಾನವನ್ನು ಸ್ಪಷ್ಟವಾಗಿ ನೋಡಬಹುದು. ತಮಿಳು, ತೆಲಗು, ಪಂಜಾಬಿ, ಮರಾಠಿ, ಗುಜರಾತಿ, ಬಂಗಾಳಿ ಜನರು ಈ ವಿಷಯದಲ್ಲಿ ನಮಗಿಂತ ಬಹು ಮೇಲು. ಅವರಿಗೆ ತಮ್ಮ ಮಾತೃಭಾಷೆಯ ಮೇಲೆ ನಮಗಿಂತ ಹೆಚ್ಚಿನ ಅಭಿಮಾನವಿದೆ. ತಮ್ಮ ಸಾಂಸ್ಕೃತಿಕ ಸಂಘಗಳ ಎಲ್ಲ ಸಂದರ್ಭಗಳಲ್ಲೂ ಅವರು ವೇದಿಕೆಯ ಮೇಲೆ ತಮ್ಮ ಮಾತೃ ಭಾಷೆಯನ್ನು ಬಿಟ್ಟು ಇಂಗ್ಲಿಷಿನಲ್ಲಿ ಮಾತನಾಡುವುದಿಲ್ಲ. ನಮ್ಮ ಕನ್ನಡಿಗರು ಮಾತ್ರ ಎಲ್ಲವನ್ನೂ ಇಂಗ್ಲಿಷಿನಲ್ಲಿ ಹೇಳಿ ಮುಗಿಸುತ್ತಾರೆ. ಕನ್ನಡ ಸಂಘ, ಕನ್ನಡ ಬಳಗಗಳೆಂಬ ಸಾಂಸ್ಕೃತಿಕ ಸಂಘಗಳ ಹೆಸರಿನ ಆಶ್ರಯದಲ್ಲಿ, “ಕನ್ನಡ ಉಳಿಸಿ ಬೆಳಸಿ, ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಕವಿವಾಣಿಯ ಶೀರ್ಷಿಕೆಯನ್ನು ಕೇವಲ ಸಂಘದ ಪ್ರಚಾರಕ್ಕಾಗಿ ಉಪಯೋಗಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯ ಭವಿಷ್ಯ ಬಲು ಶೂನ್ಯ ಎನಿಸುತ್ತದೆ. ಕರ್ನಾಟಕದಲ್ಲೇ, ಬಹುಶಃ ಕನ್ನಡದ ಭಾಷೆಯ ಉಳಿವು ಇನ್ನು ೫೦ ವರ್ಷಗಳು ಮಾತ್ರ ಎಂಬ ನಮ್ಮ ಹಿರಿಯ ಸಾಹಿತಿಗಳ ಭಯಂಕರ ಭವಿಷ್ಯವಾಣಿ, ಇನ್ನೂ ಮುಂಚೆಯೆ ನಿಜವಾಗುವ ಪ್ರಬಲ ಸೂಚನೆಗಳಿವೆ.

  ಕನ್ನಡಿಗರ ಈ ನಿರಭಿಮಾನ ನಮ್ಮ ಸಂಸ್ಕೃತಿಗೆ ಮಾರಕವಾಗುತ್ತಿದೆ. ಡಾ.ಚಂದ್ರು ಅವರು ಹೇಳಿರುವಂತೆ, ಭಾಷೆಯ ಮೂಲಕ ನಮ್ಮ ನಡೆ-ನುಡಿ, ಸಂಪ್ರದಾಯ, ಪರಂಪರೆ ಎಲ್ಲವೂ ಮುಂದಿನ ಪೀಳಿಗೆಗೆ ಮುಂದುವರೆಯುವ ಸುವರ್ಣಾವಕಾಶವಿದೆ. ನಮ್ಮ ಉನ್ನತ ಮಟ್ಟದ ಸಾಹಿತ್ಯ, ಸಂಗೀತ, ಊಟ-ಉಪಚಾರ ಎಲ್ಲವೂ ನಮ್ಮ ಭಾಷೆಯ ಮಾಧ್ಯಮವಿಲ್ಲದೆ ಸೊರಗಿ ನಶಿಸಿ ಹೋಗುತ್ತದೆ. ಆದ್ದರಿಂದ ನಮ್ಮ ಭಾಷೆಯನ್ನು ಜೀವಂತವಾಗಿಡುವುದು ಅವಶ್ಯಕ. ಹೊರದೇಶದಲ್ಲಿದ್ದ ಮಾತ್ರಕ್ಕೆ ನಮ್ಮ ಭಾಷೆ-ಸಂಸ್ಕೃತಿಗಳನ್ನು ಪೂರ್ಣವಾಗಿ ತೊರೆಯ ಬೇಕಿಲ್ಲ. ಹಾಗೆ ಮಾಡಿ ಎಂದು ಯಾವ ದೇಶದ ಸರಕಾರವೂ  ಅಂತಹ ನಿಷೇಧಾಜ್ಞೆಯನ್ನೂ ನಮ್ಮ ಮೇಲೆ ಹೇರಿಲ್ಲ. ವಾಸ್ತವವಾಗಿ, ಈ ಪಶ್ಚಿಮ ದೇಶಗಳಲ್ಲಿ ಹೊರನಾಡ ಸಂಸ್ಕೃತಿಯನ್ನು ಜೀವಂತವಾಗಿಡುವ ಉದ್ದೇಶದಿಂದ ಪ್ರತಿ ನಗರದಲ್ಲಿ ಸರ್ಕಾರ ಹೊರನಾಡ ಸಂಸ್ಕೃತಿಯ ಬೆಳವಣಿಗೆ ಮತ್ತು ಏಳಿಗೆಗೆ, ತಮ್ಮ ಪುರಸಭೆಗಳಲ್ಲಿ, ಪ್ರತ್ಯೇಕವಾದ ವಿಭಾಗವೊಂದನ್ನು ಸ್ಥಾಪಿಸಿರುವರಲ್ಲದೆ, ನಮ್ಮ ಸಾಂಸ್ಕೃತಿಕ ಚಟುವಟಿಕೆಗಳನ್ನು ಪೋಷಿಸಿ ಬೆಳಸಿ ಅದನ್ನು ಮುಂದುವರೆಸಲು ಉತ್ತಮ ಅವಕಾಶ ಮತ್ತು ಉತ್ತೇಜನಗಳನ್ನಿತ್ತಿದ್ದಾರೆ. ಅದನ್ನು ಉಪಯೋಗಿಸಿಕೊಳ್ಳುವುದು ನಮ್ಮ ಮೇಲೆ ನಿರ್ಭರವಾಗಿದೆ. ನಮ್ಮ ನಾಡಿನ ಉಡುಪು-ತೊಡಪು, ಹಬ್ಬ-ಹರಿದಿನ, ಊಟ-ತಿಂಡಿ ಹೀಗೆ ಹಲವು ಹತ್ತು ಸಂಸ್ಕೃತಿಯ ಮುಖಗಳ ಮೂಲಕ ಇದನ್ನು ನಾವು ಮುಂದುವರೆಸಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಭಾಷೆ ಮಾತ್ರ ಹಿಂದುಳಿದಿದೆ. ನಮ್ಮ ಭಾಷೆಯ ಬಗ್ಗೆ ನಮ್ಮವರಿಗಿರುವ ಈ ತಾತ್ಸಾರದ ಮನೋಭಾವನೆಯನ್ನು ಅಳಿಸುವವರೆಗೂ ನಮ್ಮ ಭಾಷೆಯ ಭವಿಷ್ಯ ಶೂನ್ಯ. ಲಂಡನ್ನಿನ ಬ್ರಿಟಿಷ್ ಗ್ರಂಥಾಲಯದಲ್ಲಿ ಭಾರತೀಯ ಭಾಷೆಗಳ ಪುಸ್ತಕದ ದೊಡ್ಡ ಭಂಡಾರವೇ ಇದೆ. ನಮ್ಮ ಭಾಷೆಗಳನ್ನು ಕಲಿಸಿ ಅದನ್ನು ಜೀವಂತವಾಗಿಡಲು ಭಾಷಾಶಾಸ್ತ್ರದ ಕೇಂದ್ರಗಳಿವೆ. ಆದರೆ ಅವುಗಳ  ಉಪಯೋಗ ಪೂರ್ಣವಾಗಿ ಆಗುತ್ತಿಲ್ಲ ಎಂಬ ಸಂಗತಿ ಅಲ್ಲಿನ ಗ್ರಂಥಪಾಲಕರಿಂದ ತಿಳಿದು ಬಂದಿದೆ. ಲಂಡನ್ನಿನಲ್ಲಿರುವ ಭಾರತೀಯ ವಿಧ್ಯಾಭವನದ ಅಧ್ಯಕ್ಷರು, ತಮ್ಮ ಭವನದಲ್ಲಿ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದುವರೆಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಅದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮೂಲತಃ ಕನ್ನಡಿಗರಾದ ಅವರ ಅಭಿಪ್ರಾಯದಂತೆ,  ಕನ್ನಡ ಭಾಷೆಯನ್ನುಳಿದು ಇನ್ನೆಲ್ಲಾ ಭಾರತೀಯ ಭಾಷೆಗಳು ಈ ದಿಶೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಕನ್ನಡಿಗರು ಮಾತ್ರಾ ಇನ್ನೂ ತಮ್ಮ ನಿರಭಿಮಾನದ ಹಾದಿಯಲ್ಲೆ ಸಾಗುತ್ತಿದ್ದಾರೆ.

 ನಮ್ಮ ಕನ್ನಡ ಕುಟುಂಬದ ಮಕ್ಕಳು ಭಾರತೀಯ ಸಂಗೀತ ಮತ್ತು ನೃತ್ಯಗಳನ್ನು ಉತ್ಸುಕತೆಯಿಂದ ಕಲಿತು ಆ ಸಂಸ್ಕೃತಿಯನ್ನು ಮುಂದುವರೆಸುತ್ತಿದ್ದಾರೆ. ಆದರೆ ಈ ನೃತ್ಯ ಮತ್ತು ಸಂಗೀತದಲ್ಲಿ ಅವರು ಉಪಯೋಗಿಸುವ ಸಾಹಿತ್ಯದ ಅರಿವು ಅವರಿಗಿಲ್ಲ. ಎಲ್ಲವನ್ನೂ ಆಂಗ್ಲ ಭಾಷೆಗೆ ತರ್ಜುಮೆ ಮಾಡಿ, ನಮ್ಮ ಸಾಹಿತ್ಯದ ಸೌಂಧರ್ಯವನ್ನು ಪೂರ್ಣವಾಗಿ ಅರಿಯದೆ, ಸವಿಯದೆ, ಆಂಗ್ಲ ಭಾಷೆಯ ಮಾಧ್ಯಮದಲ್ಲಿ ನಮ್ಮ ಸನಾತನ ಕಲೆ ಮತ್ತು ಸಂಸ್ಕೃತಿಯನ್ನು ಮುಂದುವರೆಸುವ ಸಾಹಸ ನಡೆಸಿದ್ದಾರೆ. ನಮ್ಮ ಭಾಷೆಯ ಮೂಲ ಸೊಗಡು ಮತ್ತು ಸೌಂಧರ್ಯವನ್ನು ಮನಸಾರೆ ಸವಿಯುವ ಬಂಗಾರದಂತಹ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಪಂಚದಲ್ಲಿನ ಯಾವುದೇ ಉನ್ನತ ಸಾಹಿತ್ಯಕ್ಕೆ ಕಡಿಮೆಯಿರದ ನಮ್ಮ ಕನ್ನಡ ಸಾಹಿತ್ಯ ಈ ಎಳೆಯ ಮನಗಳನ್ನು ತಲಪುವ ಅವಕಾಶವೆ ಇಲ್ಲದಂತಾಗಿದೆ. ನಮ್ಮ ಪಂಪ, ರನ್ನ, ರಾಘವಾಂಕ, ಕುಮಾರವ್ಯಾಸರ ಕಬ್ಬಿಣ ಕಡಲೆಯ ಕನ್ನಡ ಸಾಹಿತ್ಯ ಪ್ರಕಾರಗಳಿರಲಿ; ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಡಿವಿಜಿ, ಗೋಕಾಕ್, ಅಡಿಗ, ಅನಂತಮೂರ್ತಿ, ಭೈರಪ್ಪ ಮತ್ತು ತ.ರಾ.ಸು ವಿರಚಿತ ನವೀನ ಕನ್ನಡ ಕೃತಿಗಳನ್ನಾದರೂ ಓದುವ ಅವಕಾಶದಿಂದ ವಂಚಿತರಾಗಿದ್ದಾರೆ. ಕೇವಲ ಆಂಗ್ಲ ಭಾಷೆಯ ನೆರಳಲ್ಲಿ ನಮ್ಮ ಸಂಸ್ಕೃತಿಯನ್ನು ಮುಂದುವರೆಸುವ ಪೊಳ್ಳು ಪ್ರಯತ್ನ ನಡೆಸುತ್ತಿರುವುದು ಬಹು ದುಃಖಕರವಾದ ಸಂಗತಿ. ಈ ಪರಿಸ್ಥಿತಿಯನ್ನು ಸರಿಪಡಿಸಲು ಸಾಧ್ಯವಿದೆ. ಈ ದಿಶೆಯಲ್ಲಿ, ಹೊರನಾಡಿನಲ್ಲಿರುವ  ನಮ್ಮ ಸಾಂಸ್ಕೃತಿಕ ಸಂಘಗಳು ತಮ್ಮ ಜವಾಬ್ದಾರಿಯನ್ನರಿತು ಸಂಘದ ಚಟುವಟಿಕೆಗಳನ್ನು ಕನ್ನಡ ಭಾಷೆಯಲ್ಲೇ ನಡೆಸಬೇಕು. ಕರ್ನಾಟಕ ಸರ್ಕಾರ ಹೊರನಾಡಿನಲ್ಲಿ ಪ್ರಾರಂಭಿಸಿ ಪ್ರೋತ್ಸಾಹಿಸುತ್ತಿರುವ ” ಕನ್ನಡ ಕಲಿ” ಕಾರ್ಯಕ್ರಮವನ್ನು ಸುಗಮವಾಗಿ ನಡೆಸಿ, ನಮ್ಮ ಮಕ್ಕಳನ್ನು ಕನ್ನಡ ಕಲಿಯಲು ಪ್ರೇರೇಪಿಸಬೇಕು. ಈ ಕಾರ್ಯಕ್ರಮದ ಯಶಸ್ವೀಕರಣಕ್ಕೆ ನಮ್ಮ ಸರ್ಕಾರದೊಡನೆ ಉತ್ತಮ ಸಹಕಾರವನ್ನು ಬೆಳೆಸಿಕೊಂಡು, ಅಲ್ಲಿನ ಭಾಷಾ ಕಲಿಕೆಯ ಪಠ್ಯಕ್ರಮವನ್ನು ಅನುಸರಿಸಿ ನಮ್ಮ ಮಕ್ಕಳು ಕನ್ನಡ ಭಾಷೆಯ ಪ್ರಾವೀಣ್ಯವನ್ನು ಪೂರ್ಣವಾಗಿ ಪಡೆಯುವ ಸನ್ನಿವೇಶವನ್ನು ಕಲ್ಪಿಸಿದರೆ ಮಾತ್ರ ಸಾಧ್ಯ.

 ಆದರಿಲ್ಲಿ ನಡೆಯುತ್ತಿರುವ ವಿದ್ಯಮಾನವೆ ಬೇರೆ. ಬಹುತೇಕ ಕನ್ನಡಿಗರು, ಕನ್ನಡ ಸಂಘದ ಸಮಾರಂಭಗಳಲ್ಲಿ ಕೇವಲ ಸ್ನೇಹಿತರೊಡನೆ ಕಲೆತು ಸಮಯ ಕಳೆಯುವ ಸಲುವಾಗಿ ಮಾತ್ರ ಭಾಗವಹಿಸುವ ಪದ್ಧತಿಯನ್ನಿಟ್ಟುಕೊಂಡಿದ್ದಾರೆ. ಒಮ್ಮೆ ಆ ಸಮಾರಂಭ ಮುಗಿಯಿತೆಂದರೆ ಆಯಿತು, ಮತ್ತೆ ಇನ್ನಾರು ತಿಂಗಳು ಅಥವ ವರ್ಷ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಈ ಪದ್ಧತಿ ತಪ್ಪೇನಲ್ಲ, ಆದರೆ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನುಳಿಸಿ ಅದನ್ನು ಮುಂದಿನ ಯುವ ಪೀಳಿಗೆಗೆ ಯಶಸ್ವಿಯಾಗಿ ಮುಂದುವರೆಸುವ ಪ್ರಾಥಮಿಕ ಉದ್ದೇಶ ಇಲ್ಲಿ ಪೂರ್ಣವಾಗಿ ನೆರವೇರುತ್ತಿಲ್ಲ. ಸಂಘದ ಪದಾಧಿಕಾರಿಗಳು ಈ ಸಮಾರಂಭಗಳಲ್ಲಿ, ಕನ್ನಡದ ಬದಲು ಆಂಗ್ಲ ಭಾಷೆಯಲ್ಲಿ ಎಲ್ಲವನ್ನೂ ನಡೆಸುವ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಇದಕ್ಕಾಗಿ ಕರ್ನಾಟಕದಿಂದ ಕೆಲವು ಗಣ್ಯರನ್ನು ಆಹ್ವಾನಿಸಿ, ನಮ್ಮ ಸಂಘಗಳ ಚಟುವಟಿಕೆಗಳನ್ನು ಒಂದು ದಿನದ ಮಟ್ಟಿಗೆ ಅವರ ಮುಂದೆ ಉತ್ತಮ ರೀತಿಯಲ್ಲಿ ಆಡಂಬರದೊಂದಿಗೆ ಪ್ರದರ್ಶಿಸುವ ನಾಟಕ ನಡೆಸಿದ್ದಾರೆ. ಇಲ್ಲಿ ಕನ್ನಡ ಭಾಷೆಯಲ್ಲಿ ಏನೂ ನಡೆಯುವುದಿಲ್ಲ. ಬಂದ ಅತಿಥಿಗಳು ಇದೇನಾಗುತ್ತಿದೆ ಎಂದು ಅರಿಯುವ ಮುನ್ನವೇ, ನಮ್ಮ ದೇಶದ ಹಲವು ನೃತ್ಯ ಮತ್ತು ಹಾಡುಗಳನ್ನು ಹಾಗೂ ಹೀಗೂ ಪ್ರದರ್ಶಿಸಿ ಅವರನ್ನು ಮೋಡಿಮಾಡುತ್ತಾರೆ. ಈ ಪರಿಸ್ಥಿತಿಯಲ್ಲಿ, ನಮ್ಮ ಭಾಷೆಯ ಬೆಳವಣಿಗೆಗೆ ಅವಕಾಶವೇ ಇಲ್ಲ. ಮಕ್ಕಳಿಗೆ ನಮ್ಮ ಕನ್ನಡತನದ ಅರಿವು ಮೂಡುವ ಸಾಧ್ಯತೆ ಬಹು ಕಡಿಮೆ. ಇನ್ನು ನಮ್ಮ ಮನೆಗಳಲ್ಲಿ ಬಹುತೇಕ ಮಾತಾ-ಪಿತೃಗಳು ಮಕ್ಕಳೊಂದಿಗೆ ಆಂಗ್ಲ ಭಾಷೆಯಲ್ಲೆ ತಮ್ಮ ದಿನವಹಿ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಾರೆ. ಮನೆಯಿಂದ ಒಮ್ಮೆ ಹೊರಗೆ ಕಾಲಿಟ್ಟೊಡನೆ ಅವರಿಗೆ ಎಲ್ಲವೂ ಇಂಗ್ಲಿಶೇ! ಹೀಗಾಗಿ ನಮ್ಮ ಕನ್ನಡ ಸಂಘಗಳಿಗೆ, ಕನ್ನಡ ಭಾಷೆಯನ್ನು ಮುಂದುವರೆಸುವ ದಿಶೆಯಲ್ಲಿ ಹೆಚ್ಚಿನ ಜವಾಬ್ದಾರಿ ಹೊರುವ ಅವಶ್ಯಕತೆಯಿದೆ. ಅದಕ್ಕಿಂತ ಹೆಚ್ಚಾಗಿ, ನಮ್ಮ ಕನ್ನಡ ಕುಟುಂಬದ ಅಪ್ಪ-ಅಮ್ಮ ಮತ್ತು ಅಜ್ಜ-ಅಜ್ಜಿಯರು ತಮ್ಮ ಮಕ್ಕಳೊಂದಿಗೆ ಕನ್ನಡದಲ್ಲಿ ದಿನವಹಿ ಮಾತನಾಡದಿದ್ದರೆ ನಮ್ಮ ಮಕ್ಕಳು ಪೂರ್ಣವಾಗಿ ಆಂಗ್ಲ ಭಾಷೆಯ ಸೆರೆಯಲ್ಲಿ ಸಿಲುಕಿ, ತಮ್ಮತನವನ್ನು ಕಳೆದುಕೊಳ್ಳುವ ದಿನಗಳು ಇನ್ನು ದೂರವಿಲ್ಲ. ಒಮ್ಮೆ ನಮ್ಮ ಭಾಷೆ ನಶಿಸಿತೆಂದರೆ, ನಮ್ಮ ಕನ್ನಡ ಸಂಸ್ಕೃತಿಯ ಅಳಿವೂ ಖಂಡಿತ.

  “It is not our duty to save languages, the desire has to come from the speakers, it is their heritage and they should want to protect what is a sacred symbol of their civilization  we can only attempt to persuade”.

 

 ಇತ್ತೀಚೆಗೆ ಬಿ.ಬಿ.ಸಿ. ಸುದ್ದಿಧಾರೆಯಲ್ಲಿ ನಾನು ಓದಿದ ಲೇಖನವೊಂದಕ್ಕೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿರುವ ಸೈಂಟ್ ಆಂಡ್ರ್ಯೂಸಿನ ಲ್ಯೂಕ್ ವೋಲನ್ ಅವರ ಈ ಮೇಲಿನ ನುಡಿಗಳ ಅರ್ಥವನ್ನು ಮಾನವ ಗ್ರಹಿಸಿದರೆ, ಕೇವಲ ಭಾಷೆಗಳಲ್ಲ, ಸಂಸ್ಕೃತಿಗಳೆ ಉಳಿದು, ಬೆಳೆದು ನಮ್ಮ ಮಾನವ ಕುಲದ ಏಳಿಗೆಗೆ ಕಾರಣವಾಗುತ್ತದೆ.

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s