ಬದಿಗೆ

ನಮ್ಮ ಸಮಾಜದಲ್ಲಿನ್ನೂ ಜೀವಂತವಾಗಿದ್ದಾನೆಯೇ ಚೋಮನ-ದುಡಿಯ ಚೋಮ?

ಕನ್ನಡ ಸಾಹಿತ್ಯದ “ಕಡಲ ತೀರದ ಭಾರ್ಗವನೆಂದೇ” ಹೆಸರಾದ ಮಹಾಸಾಹಿತಿ ಡಾ.ಶಿವರಾಮ ಕಾರಂತರು ತಮ್ಮ ಕೃತಿರತ್ನಗಳಲ್ಲಿ ಒಂದಾದ “ಚೋಮನ ದುಡಿ”ಯನ್ನು ರಚಿಸಿ ಹಲವಾರು ದಶಕಗಳೇ ಕಳೆದಿವೆ. ೧೯೩೧ರಲ್ಲಿ ಪ್ರಕಟವಾದ ಈ ಕಾದಂಬರಿ, ನಮ್ಮ ಸಮಾಜದಲ್ಲಿ ಅಂದು, ದಲಿತರು ಅನುಭವಿಸುತ್ತಿದ್ದ ಶೋಷಣೆಯನ್ನು ಮನಮುಟ್ಟುವಂತೆ ಚಿತ್ರಿಸಿರುವ, ಸಮಕಾಲೀನ ಸಾಹಿತ್ಯದಲ್ಲಿನ ಉತ್ತಮ ಪುಸ್ತಕಗಳಲ್ಲಿ ಒಂದು ಅನೇಕರ ಅಭಿಪ್ರಾಯ. ಕಾರಂತರು ತಮ್ಮ ಕೃತಿಗಳಲ್ಲಿ ಸಾಮಾನ್ಯವಾಗಿ ತಾವು ಹುಟ್ಟಿ, ಬೆಳೆದ ಪಶ್ಚಿಮ ಕರಾವಳಿಯಲ್ಲಿನ ದಕ್ಷಿಣ ಕನ್ನಡ ಪ್ರದೇಶದ ಜೀವನ ವೈಖರಿಯನ್ನು ತಮ್ಮ ಲೇಖನಿಯಲ್ಲಿ ಬಹು ಸುಂದರವಾಗಿ ನಿರೂಪಿಸುತ್ತಿದ್ದ ಕಾದಂಬರಿಕಾರ. ಈ ಕೃತಿ “ಚೋಮನ ದುಡಿ” ಭಾರತ ದೇಶದ ಸಮಾಜದಲ್ಲಿನ ಅತ್ಯಂತ ಕುರೂಪ ವ್ಯವಸ್ಥೆಯಾದ “ಜಾತಿ-ಪದ್ಧತಿ” ಮತ್ತು “ಜೀತ-ಪದ್ಧತಿಯ” ಅನೇಕ ಮುಖಗಳನ್ನು ಓದುಗರ ಮುಂದಿಡುವಲ್ಲಿ ಯಶಸ್ವಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಜಾತಿ ಪದ್ಧತಿಯ ಚಿತ್ರದೊಂದಿಗೆ, ಕಾರಂತರು ಆ ದಿನಗಳಲ್ಲಿ ನಮ್ಮ ಹಳ್ಳಿಯ ಜೀವನದ ಚಿತ್ರವನ್ನು ನಮ್ಮ ಕಣ್ಣೆದುರಿಗೇ ನಿಲ್ಲಿಸಿದಂತೆ ಭಾಸವಾಗುತ್ತದೆ. ಪಟ್ಟಣದ ಆಧುನಿಕ ಪ್ರಭಾವಗಳಿಂದ ಬಹುದೂರವಾಗಿ, ತನ್ನ ಹಳೆಯ ರೀತಿ-ನೀತಿಗಳಿಂದ ತುಂಬಿದ್ದು, ಅಲ್ಲಿನ ಪ್ರಜೆಗಳಿಗೆ ಹೊರಗಿನ ಪ್ರಪಂಚದ ತಿಳುವಳಿಕೆಯಿರದ ಕಾರಣ ಮೇಲ್ಮಟ್ಟದ ವರ್ಗ, ಕೆಳವರ್ಗದ ಜನರನ್ನು ಶೋಷಿಸುತ್ತಿದ್ದ ಆ ಸಮಯದ ದಾಖಲೆ ನನ್ನಂತಹ ಅನೇಕ ಯುವ ಪೀಳಿಗೆಗೆ, ನಮ್ಮ ಸಮಾಜದ ಕುರೂಪ ಮುಖವನ್ನು ತಮ್ಮ ಲೇಖನಿಯ ಕನ್ನಡಿಯಲ್ಲಿ ತೋರಿದ ಡಾ.ಕಾರಂತರ ಈ ಕೃತಿ ಒಂದು ರೀತಿಯಲ್ಲಿ “ಸಮಯದ-ಯಂತ್ರ” ವಿದ್ದಂತೆ. ಅದರಲ್ಲಿ ಕುಳಿತು, ೧೯೩೦ರ ದಶಕಕ್ಕೆ ಪ್ರಯಾಣಿಸಿ, ಚೋಮನ ಪರಿವಾರದ ಈ ದಾರುಣ ಜೀವನದ ಅನುಭವನ್ನು ನಾವೇ ಸ್ವಯಂ ನೋಡಿದ ಅನುಭವವಾಗುತ್ತದೆ.೧೯೬೧ರ ದಶಕದಲ್ಲಿ ಹುಟ್ಟಿ ಮೈಸೂರಿನಂತಹ ಸಾಂಸ್ಕೃತಿಕ ರಾಜಧಾನಿಯಲ್ಲಿ ಬೆಳೆದ ನನಗೆ, ಕಾರಂತರ ಹೆಸರು ನನ್ನ ಪ್ರೌಢಶಾಲೆಯ ದಿನಗಳಲ್ಲಿ, ಕನ್ನಡ ಪಠ್ಯಪುಸ್ತಕದಲ್ಲಿ ನಾವು ಓದುತ್ತಿದ್ದ ಕಾರಂತರ ಕವನ ಮತ್ತು ಲೇಖನದಿಂದ ಮೊದಲು ಪರಿಚಿತವಾಯಿತು. ನನ್ನ ಕನ್ನಡ ತರಗತಿಯ ಶಿಕ್ಷಕಿ ಶ್ರೀಮತಿ.ಶಕುಂತಲಾ ಬಾಯಿ, ಅಂದು ಕಾರಂತರ ಮೇರುಕೃತಿ “ಮೂಕಜ್ಜಿಯ ಕನಸುಗಳು”, (ಮುಂದೆ ಭಾರತ ಸಾಹಿತ್ಯದ ಅತ್ಯುತ್ತಮ ಪ್ರಶಸ್ತಿ “ಜ್ಞಾನಪೀಠ ಪ್ರಶಸ್ತಿ”ಯಿಂದ ಪುರಸ್ಕೃತವಾಯಿತು) ಬಗ್ಗೆ ತಮ್ಮ ಅನಿಸಿಕೆಗಳನ್ನು ನಮ್ಮ ಮುಂದಿಡುತ್ತಿದ್ದಾಗ, ಇನ್ನೂ ಅಷ್ಟೇನೂ ಪ್ರೌಢತೆಯಿಲ್ಲದ ನನಗೆ ಡಾ.ಶಿವರಾಮ ಕಾರಂತರ ಬಗ್ಗೆ ತಿಳಿದಿದ್ದುದು ಬಹಳ ಕಡಿಮೆ. ಆದರೆ ಇದೇ ಸಮಯದಲ್ಲಿ, ಅಂದರೆ ೧೯೭೫ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ “ಚೋಮನ ದುಡಿ” ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿ, ಹೊಸ ಅಲೆಯ ಚಿತ್ರಗಳ ಬಗ್ಗೆ ನಮ್ಮ ಜನವರ್ಗದಲ್ಲಿ ಒಂದು ವಿಶಿಷ್ಟ ಸ್ಥಾನವನ್ನೇ ಗಳಿಸಿತು. ಕಾರಣಾಂತರದಿಂದ ಆ ಸಮಯದಲ್ಲಿ ನಾನು ನೋಡಲಾಗದ ಆ ಚಿತ್ರವನ್ನು ಮುಂದೆ ಎರಡು ದಶಕಗಳ ನಂತರ ನೋಡಿದ ಮೇಲೆ, ಕಾರಂತರ ಪುಸ್ತಕವನ್ನು ಓದಲೇ ಬೇಕೆನ್ನಿಸಿತು. ಆದರೆ ಅದೂ ಸಹಾ ನನ್ನ ವೈಯಕ್ತಿಕ ಸಂಧರ್ಭಗಳಿಂದಾಗಿ ೨೦೧೧ರವರೆಗೂ ಸಾಧ್ಯವಾಗಲಿಲ್ಲ. ಈಗ ನಾನು ಈ ಪಶ್ಚಿಮ ದೇಶದಲ್ಲಿ ವಾಸಿಸಲಾರಂಭಿಸಿ ಸುಮಾರು ೧೭ ವರ್ಷಗಳೇ ಕಳೆದಿದ್ದು, ಹೋದ ವರ್ಷ ಲಂಡನ್ನಿನಲ್ಲಿರುವ ಪ್ರಸಿದ್ಧ ಬ್ರಿಟಿಷ್ ಗ್ರಂಥಾಲಯ ಯು.ಕೆ.ಕನ್ನಡ ಬಳಗಕ್ಕೆಂದು ಕೊಡುಗೆಯಾಗಿತ್ತ ಅನೇಕ ಪುಸ್ತಕಗಳಲ್ಲಿ ಒಂದಾಗಿದ್ದ, ಕಾರಂತರ ಈ ಕೃತಿರತ್ನ ನನ್ನ ಅದೃಷ್ಟವಶಾತ್ ನನ್ನ ಕೈಸೇರಿತು. ಸುಮಾರು ೩೦-೪೦ ಪುಟಗಳ ಈ ಮೇರು ಕೃತಿ, ತನ್ನ ಸರಳ ಸುಲಲಿತ ಭಾಷೆಯಿಂದ ಓದುಗರನ್ನು ಸರಾಗವಾಗಿ ಹಿಡಿದಿಟ್ಟು ಒಂದೇ ಬಾರಿಗೆ ಓದಿ ಮುಗಿಸುವ ನಿರ್ಧಾರಕ್ಕೆ ತಳ್ಳುತ್ತದೆ. ಚೋಮನ ದುಡಿ ಕಾದಂಬರಿಯಲ್ಲಿ, ಚೋಮ ತನ್ನ ಹಳ್ಳಿಯಲ್ಲಿನ ದಲಿತರಲ್ಲಿದ್ದ ನಾಲಕ್ಕು ಗುಂಪುಗಳಲ್ಲಿ ಅತೀ ಕೆಳವರ್ಗಕ್ಕೆ ಸೇರಿದವ. ನಾಲಕ್ಕು ಮಕ್ಕಳ ತಂದೆಯಾದ ಅವನು ತನ್ನ ಕುಟುಂಬದ ಸಹಿತ ಆ ಹಳ್ಳಿಯ ಜಮೀನುದಾರ ಸಂಕಪ್ಪಯ್ಯನ ಕಪಿಮುಷ್ಟಿಯಲ್ಲಿ, ಅಂದಿನ ಸಮಾಜದಲ್ಲಿನ ಕ್ರೂರ ವ್ಯವಸ್ಥೆಯ ಮತ್ತೊಂದು ಮುಖವಾಗಿದ್ದ “ಜೀತ ಪದ್ಧತಿ” ಯಲ್ಲಿ ಸಿಲುಕಿ ಸೆರೆಯಾಗಿದ್ದ ಅಸಂಖ್ಯಾತ ದುರದೃಷ್ಟವಂತರಲ್ಲಿ ಒಬ್ಬ. ಇಂತಹ ಜಮೀನುದಾರರ ಏಳಿಗೆಗೆ ತಮ್ಮ ಜೀವನವಿಡೀ, ದಿನಕ್ಕೆ ಅವರು ನೀಡುತ್ತಿದ್ದ ಕೇವಲ ಒಂದು ಸೇರು ಅಕ್ಕಿಗೆ ದುಡಿದು, ಅವರ ಕೈಯಲ್ಲಿ ಮಾಡಿದ ಹಲವು ರೂಪಾಯಿಗಳ ಸಾಲಕ್ಕೆ, ಅವರು ಸೇರಿಸುತ್ತಿದ್ದ ಬಡ್ಡಿಗೆ ಅಡಿಯಾಳಾಗಿ, ತಮ್ಮ ಜೀವನದ ಆಸೆ-ಆಕಾಂಕ್ಷೆಗಳನ್ನೆಲ್ಲ ಬದಿಗೊತ್ತಿ, ಮೂಕ ಪಶುವಿನಂತೆ ಹಗಲಿರುಳೂ ದುಡಿಯುತ್ತಿದ್ದ ಚೋಮ ಮತ್ತು ಅವನ ಸಂಸಾರದ ಚಿತ್ರ ಈ ಕಾದಂಬರಿಯ ಕೇಂದ್ರ ವಸ್ತು. ಹೇಗಾದರೂ ಮಾಡಿ ತನ್ನ ಧಣಿಯ ಬಳಿ ಒಂದು ಎಕರೆಯ ಜಮೀನನ್ನು ಪಡೆದು ಅದನ್ನು ತನ್ನ ಬಳಿಯಿದ್ದ, ತಾನೇ ಪೋಷಿಸಿ ಬೆಳಸಿದ್ದ ಎರಡು ಎತ್ತಿನ ಸಹಾಯದಿಂದ ಉತ್ತು, ರೈತನಾಗಬೇಕೆಂಬ ಚೋಮನ ಮಹದಾಸೆ ಈ ಕಥೆಯಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತದೆ. ಪ್ರತಿಯೊಂದು ಬಾರಿ ತನ್ನ ಮನಸ್ಸಿನ ಈ ಇಚ್ಛೆಯನ್ನು ತನ್ನ ಧಣಿಯೊಡನೆ ಹೇಳಿಕೊಂಡಾಗ, ಅವನು ತನ್ನ ಕಡು ಸಂಪ್ರದಾಯಸ್ಥೆ ತಾಯಿಯೊಡನೆ ಕೇಳಿ ಹೇಳುವೆನೆಂದು ತಿಳಿಸಿ ನಂತರ ಅವನ ಆಸೆಗೆ ಭಂಗ ತರುತ್ತಿದ್ದ ಅವನ ಧಣಿಯ ಆ ಕ್ರೂರ ನಿರ್ಣಯ ಕೇವಲ ಒಂದು ವ್ಯಕ್ತಿಯ ನಿರ್ಣಯವಾಗಿರದೆ, ಅಂದಿನ ಸಮಾಜದಲ್ಲಿನ ಮೇಲುವರ್ಗದ ಜನರ ಶೋಷಣಾ ಪ್ರವೃತ್ತಿಯ ಸಮಗ್ರ ಚಿತ್ರದಂತಿದೆ. ಈ ಎಲ್ಲಾ ನಿರಾಸೆಗಳನ್ನೂ ಮರೆಯಲು ಅಂದಿನ ತನ್ನ ದುಡಿಮೆಯ ಒಂದು ಭಾಗದ ಅಕ್ಕಿಯನ್ನು, ಹಳ್ಳಿಯ ಗಡಂಗಿನಲ್ಲಿ ಸಿಗುತ್ತಿದ್ದ ಅಗ್ಗದ ದರ್ಜೆಯ ಹೆಂಡಕ್ಕೆ ಮಾರಿ, ಕಂಠ ಪೂರ್ತಿ ಕುಡಿದು, ಕಡೆಗೆ ಆ ಮತ್ತಿನಲ್ಲಿ ಉನ್ಮತ್ತನಾಗಿ ತನ್ನ ದುಡಿಯನ್ನು ಮನಃಪೂರ್ತಿ ರಾತ್ರಿಯಿಡೀ ಬಾರಿಸುತ್ತಿದ್ದ ಚೋಮನ ಜೀವನ ನಮ್ಮ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ನಿರಂತರ ಶೋಷಣೆಯನ್ನು ಪ್ರತಿಬಿಂಬಿಸುತ್ತದೆ. ತನ್ನ ಜೀವನದಲ್ಲಿ ನಡೆಯುತ್ತಿದ್ದ ಇಂತಹ ಶೋಷಣೆಯನ್ನು ತಡೆಯಲಾಗದೇ, ಅವನು ತೋರುತ್ತಿದ್ದ ವಿಲಕ್ಷಣ ವರ್ತನೆಗಳಿಗೆ, ಅವನ ನಾಲಕ್ಕು ಮಕ್ಕಳು ಪದೇ ಪದೇ ಬಲಿಯಾಗುತ್ತಿದ್ದ ಪರಿಸ್ಥಿತಿ ನಿಜಕ್ಕೂ ದಾರುಣವೆನಿಸುತ್ತದೆ. ಈ ಬಡತನದ ಹೊಡೆತ ತಡೆಯಲಾರದೇ ಕಡೆಗೆ ಕ್ರೈಸ್ತ ಮತಕ್ಕೆ ಮತಾಂತರ ಹೊಂದಿ ತನ್ನ ಜೀವನವನ್ನು ಉತ್ತಮಗೊಳಿಸಿಕೊಂಡ ಅವನ ಮಗನ ಅಸಹಾಯಕತೆ, ತನ್ನ ತಂದೆಯ ಬದಲು ಕಾಫ಼ಿ ತೋಟಕ್ಕೆ ದುಡಿಯಲು ಹೋಗಿ ಮಲೇರಿಯಾಕ್ಕೆ ತುತ್ತಾದ ಮತ್ತೊಬ್ಬ ಮಗನ ದುರಂತ, ಅದೇ ಕಾಫ಼ಿ ತೋಟದಲ್ಲಿ ದುಡಿಯಲು ಹೋಗಿ ತನ್ನ ಶೀಲವನ್ನೇ ಒತ್ತೆಯಿಟ್ಟು ತಂದೆಯ ಸಾಲತೀರಿಸಲೆತ್ನಿಸಿದ ಅವನ ಮಗಳು ಬೆಳ್ಳಿಯ ದೌರ್ಭಾಗ್ಯ ಒಂದೇ ಎರಡೇ ಈ ಕಥೆಯಲ್ಲಿ ಓದುಗನ ಮನಕಲಕುವ ಪ್ರಸಂಗಗಳು. ಇವೆಲ್ಲಕ್ಕೂ ಮಿಗಿಲಾಗಿ ಅವನ ಕಡೆಯ ಚಿಕ್ಕ ಮಕ್ಕಳಲ್ಲಿ ಒಬ್ಬ ಊರಿನ ಹಳ್ಳದಲ್ಲಿ ಈಜಲು ಹೋಗಿ ಮುಳುಗುವ ಸಮಯದಲ್ಲಿ, ಅಲ್ಲಿದ್ದ ಬ್ರಾಹ್ಮಣ ಯುವಕ ಅವನನ್ನು ಉಳಿಸಲು ಹೋದಾಗ, ಅಲ್ಲಿದ್ದ ಬ್ರಾಹ್ಮಣ ಹಿರಿಯರು ಆ ಮಗು ದಲಿತನೆಂದೂ, ಅವನನ್ನು ಮುಟ್ಟಕೂಡದೆಂದು ಆ ಯುವಕನ್ನು ತಡೆಹಿಡಿಯುವ ಸಂಧರ್ಭವನ್ನು ಕಾರಂತರು ತಮ್ಮ ಸರಳ ಭಾಷೆಯಲ್ಲಿ ಬಲು ಚಿಕ್ಕವಾಗಿ ನಿರೂಪಿಸಿದ್ದಾರೆ. ಕಥೆಯ ಅಂತ್ಯದಲ್ಲಿ, ಈ ಶೋಷಣೆಯ ಪರಿಣಾಮಗಳಿಂದಾದ ದುರಂತಗಳನ್ನು ತಡೆಯಲಾರದೆ, ತನ್ನ ದುಡಿಯನ್ನು ಬಾರಿಸುತ್ತಾ ಪ್ರಾಣ ನೀಗುವ ಚೋಮ ನಮ್ಮ ಸಮಾಜದ ಜಾತಿ ಪದ್ಧತಿಯ ಕ್ರೂರ ವ್ಯವಸ್ಥೆಗೆ ಪ್ರತೀಕವಾಗಿ, ನಮ್ಮೆಲ್ಲರ ಮನಸ್ಸಿನಲ್ಲಿ ಏಳುವ ಹಲವಾರು ಪ್ರಶ್ನೆಗಳಿಗೆ ಉತ್ತರವಿಲ್ಲದಂತಹ ಒಂದು ಬೃಹತ್ ಸಮಸ್ಯೆಯಾಗೇ ನಿಲ್ಲುತ್ತಾನೆ. ೧೯೩೦ರ ದಶಕದಲ್ಲೇ, ಜೀತ ಪದ್ಧತಿಯಂತಹ ಕ್ರೂರ ವ್ಯವಸ್ಥೆಯನ್ನು ಇಷ್ಟೊಂದು ಮನಮಿಡಿಯುವ ರೀತಿಯಲ್ಲಿ ಚಿತ್ರಿಸಿದ್ದ, ಕನ್ನಡ ಸಾಹಿತ್ಯದ ಬಹುಮುಖ ಪ್ರತಿಭೆ, ಡಾ.ಶಿವರಾಮ ಕಾರಂತರ ಈ ಕಾದಂರಿಯ ಕಥಾನಾಯಕ ಈ ೨೨ನೆಯ ಶತಮಾನದ ಭಾರತ ದೇಶದಲ್ಲಿನ ಸಮಾಜದಲ್ಲಿ ಇನ್ನೂ ಜೀವಂತನಾಗಿದ್ದಾನೆ ಎಂಬ ವಿಷಯ ದೊಡ್ಡ ದುರಂತವಲ್ಲವೇ ? ಇತ್ತೀಚಿನ ದಶಕಗಳಲ್ಲಿ ನಮ್ಮ ದೇಶ ತನ್ನ ಯಂತ್ರ-ತಂತ್ರಜ್ಞಾನ ಬೆಳವಣಿಗೆ ಅಭಿವೃದ್ಧಿಗಳಿಂದ ಗಳಿಸಿರುವ ಆರ್ಥಿಕ ಸಂಪತ್ತು ನಮ್ಮ ಸಮಾಜದ ಈ ವರ್ಗವನ್ನೇನಾದರೂ ತಲುಪಿದೆಯೇ? ಇನ್ನೂ ಇಲ್ಲಾ. ದಲಿತರ ಶೋಷಣೆಯಿನ್ನೂ ನಿರಂತರವಾಗೇ ನಡೆಯುತ್ತಿದೆ.  ಸಮಾಜದಲ್ಲಿನ ಈ ದುರ್ಬಲ ವರ್ಗದ ಸಂಸಾರಗಳಿನ್ನೂ, ಜೀತ ಪದ್ಧತಿಯಂತಹ ಕ್ರೂರತೆಯಲ್ಲಿ ಸಿಲುಕಿ ನರಳುತ್ತಲೇ ಇವೆ. ಇತ್ತೀಚೆಗೆ ನಾನು ಓದಿದ ಬಿ.ಬಿ.ಸಿ. ಅಂತರಜಾಲಾ ತಾಣದಲ್ಲಿ ಪ್ರಕಟವಾದ

  “Preventing bonded labor in India” ಲೇಖನವನ್ನು ಓದಿದಾಗ ನನಗೆ ನಾಚಿಕೆಯಿಂದ ತಲೆತಗ್ಗಿಸುವಂತಾಯಿತು. ಈ ಲೇಖನದ ಪ್ರಕಾರ, ನಮ್ಮ ಉತ್ತರ ಭಾರತದ ಬಿಹಾರ, ಝಾರಖಂಡ್, ಮಧ್ಯಪ್ರದೇಶ, ಉತ್ತರಪ್ರದೇಶ, ದೆಹಲಿ ಮತ್ತು ಛತ್ತಿಸಘರ್ ರಾಜ್ಯಗಳಲ್ಲಿ ದಲ್ಲಾಳಿಗಳು ನಮ್ಮ ಅಧಿಕಾರಿಗಳ ಆಶ್ರಯದಲ್ಲೇ, ದಲಿತ ಸಂಸಾರಗಳನ್ನು ತಮ್ಮ ಸಾಲದ ಹೊರೆಯಡಿಯಲ್ಲಿ ಸಿಕ್ಕಿಸಿ, ಅವರನ್ನು ದೊಡ್ಡ ಪಟ್ಟಣಗಳಿಗೆ ದಿನಕ್ಕೆ ೨.೦೦ ಅಮೆರಿಕ ಡಾಲರಗಳಿಗಿಂತಲೂ ಕಡಿಮೆ ಕೂಲಿಗೆ ದುಡಿಸಿಕೊಳ್ಳುತ್ತಿರುವ ಸಂಗತಿ ನಿಜಕ್ಕೂ ನಾಚಿಕೆಗೇಡು. ಇದರಲ್ಲಿ ಹಸುಳೆಗಳನ್ನೂ ಬಿಟ್ಟಿಲ್ಲಾ ಈ ರಾಕ್ಷಸರು! ದಿನವಿಡೀ ಕಲ್ಲು ಕುಟ್ಟುವ, ಬೀಡಿ ಕಟ್ಟುವ ಕೆಲಸಗಳಲ್ಲಿ, ಇಡೀ ಹಳ್ಳಿಗಳನ್ನೇ ತಮ್ಮ ವಿಷವರ್ತುಲದಲ್ಲಿ ಸಿಕ್ಕಿಸಿ ಮೆರೆಯುತ್ತಿರುವ ಈ ಅಟ್ಟಹಾಸ ನಮಗೆ ಗೌರವ ತರುವ ವಿಷಯವೇ? ಜೊತೆಗೆ, ವಿದೇಶಗಳಲ್ಲಿನ ಧರ್ಮಾರ್ಥ ಸಂಸ್ಥೆಗಳು, ಈ ಸಂಸಾರಗಳನ್ನು ಈ ಕ್ರೂರತೆಯಿಂದ ಬಿಡಿಸುವ ಕಾರ್ಯದಲ್ಲೂ ನಮ್ಮ ಅಧಿಕಾರಿಗಳು ನೆರವಾಗದೇ, ಲಂಚವನ್ನು ಈ ರಾಕ್ಷಸರಿಂದ ತಿಂದು ದಲಿತರ ಶೋಷಣೆಗೆ ನೀರೆರೆಯುತ್ತಿರುವ ಪರಿಸ್ಥಿತಿ, ನಮ್ಮ ಭಷ್ಟ ರಾಜಕಾರಣದ ರಾಕ್ಷಸೀ ಪ್ರವೃತ್ತಿಯನ್ನು ಸಮಾಜದ ಮುಂದಿಡುತ್ತದೆ. ಆಗಸ್ಟ್ ೨೩ ೨೦೧೦ರಲ್ಲಿ ಸಿ.ಎನ್.ಎನ್ ಅಮೆರಿಕಾದ ಪ್ರಸಾರ ಮಾಧ್ಯಮದ ಪತ್ರಕರ್ತನೊಬ್ಬನ ಸ್ವಂತ ಅನುಭವ ಹೀಗಿದೆ. “ಕಳೆದ ಎರಡು ವಾರಗಳಲ್ಲಿ ಉತ್ತರ ಭಾರತದಲ್ಲಿ ರಾಜಾಸ್ತಾನದಿಂದ ಹಿಡಿದು ಪಶ್ಚಿಮ ಬಂಗಾಳದವರೆಗೆ ವ್ಯಾಪಕವಾಗಿ ಪ್ರಯಾಣ ಮಾಡಿ, ಅಲ್ಲಿನ ಬೀಡಿಕಟ್ಟುವ, ಅಕ್ಕಿ, ರತ್ನಗಂಬಳಿ ನೇಯುವ ಮತ್ತು ಇಟ್ಟಿಗೆ ಮಾಡುವ ಹಲವು ವಿವಿಧ ಕೈಗಾರಿಕೆಯ ಕ್ಷೇತ್ರಗಳಲ್ಲಿ, ಅನೇಕ ರೀತಿಯ ಶೋಷಿತ ಕಾರ್ಮಿಕರನ್ನು ಭೇಟಿಮಾಡಿದ್ದೇನೆ. ಜೀತ ಪದ್ಧತಿಯ ಒಂದು ಮುಖವನ್ನು, ಹರಿಯಾಣದಲ್ಲಿ ಕಲ್ಲು ಕುಟ್ಟುವ ಕಾರ್ಮಿಕರಲ್ಲಿ ಕಂಡೆ. ಸುಮಾರು ಹದಿನಾರು ಕಿಲೋಗ್ರಾಮುಗಳ ತೂಕದ ಲೋಹದ ಸುತ್ತಿಗೆಯನ್ನು ಎತ್ತಿ, ಅದರಿಂದ ಕಲ್ಲನ್ನು ಕುಟ್ಟುವ ಅತಿ ಕಷ್ಟದ ಕೆಲಸವನ್ನು, ಸುಮಾರು ೪೦ ಡಿಗ್ರಿ ತಾಪಮಾನದಲ್ಲಿ, ಕನಿಷ್ಠ ಪ್ರಮಾಣದ ನೀರು ಮತ್ತು ಆಹಾರದ ಸಹಾಯದಿಂದ ದಿನಕ್ಕೆ ೧೨-೧೪ ಗಂಟೆಗಳ ಕಾಲ ದುಡಿಯುವ, ಈ ಕೆಲಸಗಾರರಿಗೆ ಸಿಗುವ ಮಜೂರಿ ದಿನವೊಂದಕ್ಕೆ ಕೇವಲ ೨.೦೦ ಅಮೆರಿಕನ್ ಡಾಲರಗಳು. ಅದರಲ್ಲೂ ಅರ್ಧದಷ್ಟನ್ನು ತಮ್ಮ ಸಾಲದ ಕಡೆಗೆ ಹಿಡಿದಿಟ್ಟು, ಉಳಿದ ಅರ್ಧವನ್ನು ಆಗೀಗ ಇವರ ಕೈಯಿಗೆ ಹಾಕುವ ಈ ರಾಕ್ಷಸರನ್ನು ಕಂಡಿದ್ದೇನೆ.” ಕಲಕತ್ತಾದಿಂದ ಸುಮಾರು ೩ ಮೈಲಿಗಳ ದೂರದಲ್ಲಿರುವ ಗ್ರಾಮವೊಂದರಲ್ಲಿ, ಪೂರ್ಣ ಹಳ್ಳಿಯೇ ಬೀಡಿ ಕಟ್ಟುವ ಕಾರ್ಯದಲ್ಲಿ ಜೀತ ಪದ್ಧತಿಯಲ್ಲಿ ಸಿಲುಕಿ ನಲುಗುತ್ತಿರುವ ಹೃದಯ ವಿದ್ರಾವಕ ಪ್ರಸಂಗ ನನ್ನನ್ನು ಇರಿಯಿತು. ೫ ವರ್ಷದ ಅಮೀನ ಎಂಬ ಬಾಲೆ, ಇಡೀ ದಿನ ತನ್ನ ಅಜ್ಜಿಯೊಂದಿಗೆ ಬೀಡಿ ಕಟ್ಟ ಬೇಕಾಗಿದೆ. ಶಾಲೆ ಮತ್ತಿತರ ವಯಸ್ಸಿಗೆ ತಕ್ಕ ಚಟುವಟಿಕೆಗಳಾವುವೂ ಇಲ್ಲದೇ, ತನ್ನ ಬಾಲ್ಯವನ್ನೆಲ್ಲಾ, ಈ ಜೀತದ ದುಡಿಮೆಯಲ್ಲಿ ಕಳೆದುಕೊಳ್ಳುತ್ತಿರುವ ಅಮೀನಾರಂತಹ ಮಕ್ಕಳು ನಮ್ಮಲ್ಲೆಷ್ಟಿದ್ದಾರೋ? ಈ ರೀತಿ ತಂಬಾಕನ್ನು ಸುರುಳಿ ಮಾಡುವ ಕೆಲಸದಿಂದಾಗಿ, ಅವಲಕ್ಷಣಗೊಂಡ ಬೆರಳುಗಳು, ಶ್ವಾಸಕೋಶ ಸಂಭಂಧದ ಕಾಯಿಲೆ, ಹೀಗೆ ಹಲವು ಹತ್ತಾರು ಪಿಡುಗಿಗೆ ಬಲಿಯಾಗುವ ಈ ಯುವ ಪೀಳಿಗೆ ನಮ್ಮ ಸಮಾಜದಲ್ಲಿನ ಈ ಪಾಶವೀ ವ್ಯವಸ್ಥೆಯ ಪ್ರತಿಬಿಂಬಗಳು. ಜೀತದಿಂದಾರಂಭವಾಗಿ, ಮುಂದೆ ಮಾನವ ಸಾಗಾಣಿಕೆಗೆ ಎಡೆಮಾಡುವ ಈ ಕ್ರೂರ ಪದ್ಧತಿಗೆ ಬಲಿಯಾಗಿ ಅನೇಕರು ದಿಲ್ಲಿ, ಮುಂಬಯಿ ಮತ್ತಿತರ ಮಹಾನಗರಗಳಲ್ಲಿ, ಶ್ರೀಮಂತ ಮನೆಗಳಲ್ಲಿ, ಹಗಲಿರುಳೂ ದುಡಿಮೆಗೆ ಸಿಕ್ಕಿ ನಲುಗುವಂತಾಗಿದೆ. ಅವರಿಗೆ ನೀಡಬೇಕಾದ ಮಜೂರಿಯಲ್ಲಿ, ಕೇವಲ ೧೦-೨೦ ರಷ್ಟನ್ನು ಮಾತ್ರಾ ಕೊಟ್ಟು, ಅವರನ್ನು ಶೋಷಿಸುವ ನಮ್ಮ ಸಮಾಜದಲ್ಲಿನ ಭಯಂಕರ ಶಕ್ತಿಗಳಿಗೆ ಯಾರ ಭಯವೂ ಇಲ್ಲ. ಈ ಮಾತುಗಳು, ಸಿ.ಎನ್.ಎನ್ ಪತ್ರಕರ್ತ, ಸಿದ್ಧಾರ್ಥ್ ಕಾರ ಅವರ ಸ್ವಂತ ಅನುಭವದಿಂದ ಹೊರಬಂದ ಮಾತುಗಳು. ಇದೊಂದು ಬಹಳ ಕ್ಲಿಷ್ಟವಾದ ಸಮಸ್ಯೆಯಾಗಿದ್ದು, ಇದರಲ್ಲಿ ಕಡುಬಡತನ, ಸಾಮಾಜಿಕ-ಆರ್ಥಿಕವಾಗಿ ಸಲ್ಲಬೇಕಾದ ಕಾನೂನಿನ ಹಕ್ಕುಗಳ ಅಪಹರಣ, ಹೆಂಗಸರ, ಕೆಳವರ್ಗದ ಜನಗಳ ಮೇಲಿನ ಪಕ್ಷಪಾತ, ಭ್ರಷ್ಟಾಚಾರ, ಅರಾಜಕತೆ, ಅಧಿಕಾರಿಗಳ ಸಂಪೂರ್ಣ ಉದಾಸೀನತೆ ಹೀಗೆ ಹಲವು ಹತ್ತಾರು ವಿಷಯಗಳ ಕಾರಣದಿಂದಾಗಿ, ಅಮೀನ, ಸಮೀರರಂತಹ ಹಸುಳೆಗಳನ್ನು ಜೀತಪದ್ಧತಿ ಮತ್ತು ಮಾನವ ಸಾಗಾಣಿಕೆಯಂತಹ ಅಮಾನುಷ ವ್ಯವಸ್ಥೆಗೆ ರವಾನಿಸುತ್ತಿದೆ. ಹೇಗೆ ೧೯೩೦ರ ದಶಕದ ಚೋಮನ ದುಡಿಯಲ್ಲಿನ ಚೋಮ, ಪೂರ್ಣ ಕುಟುಂಬದ ಸಹಿತ ತನ್ನ ಹಳ್ಳಿಯ ಜಮೀನುದಾರನಿಗೆ ಜೀವನದುದ್ದಕ್ಕೂ ಅಡಿಯಾಳಾಗಿ, ಅವನ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಿದ್ದನೋ, ಹಾಗೆಯೇ ೨೨ರಡೆನೆಯ ಶತಮಾನದ ದುರ್ದೈವಿ ದಲಿತರು, ಈಗಲೂ ಜಾಗತಿಕ ಆರ್ಥಿಕತೆಯ ವ್ಯವಸ್ಥೆಯಲ್ಲಿ, ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಅಗ್ಗದ ಮಾಲು ದೊರಕಿಸುವ ಕಾರ್ಯದಲ್ಲಿ ನಿರತರಾಗಿ, ತಮ್ಮ ಜೀವನವನ್ನೆಲ್ಲಾ, ಈ ರಾಕ್ಷಸೀ-ಪದ್ಧತಿಯ ನೆರಳಿನಲ್ಲೇ ಕಳೆಯುತ್ತಿದ್ದಾರೆ. ನಮ್ಮದೊಂದು ಪ್ರಾಚೀನವಾದ, ಸುಸಂಸ್ಕೃತವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಮಾಜವಲ್ಲವೇ! ಆದರೆ, ಆ ಸುಸಂಸ್ಕೃತಿಯ ನೆರಳಲ್ಲೇ, ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಈ ದೌರ್ಜನ್ಯವನ್ನು ನಾವಿನ್ನೂ ತಡೆಯಲಾರದೇ, ಅದನ್ನು ಮೂಕಪ್ರೇಕ್ಷಕರಾಗಿ ನೋಡುತ್ತಾ, ನಿಷ್ಕ್ರಿಯರಾಗಿದ್ದೇವೆ. ಇದೇಕೆ? ನಮ್ಮ ದೇಶ ಒಂದು ಕೋನದಲ್ಲಿ ನೋಡಿದರೆ, ಯಂತ್ರ-ತಂತ್ರಜ್ಞಾನದಲ್ಲಿ ಮಾಹಿರರಾಗಿ, ಅದರಿಂದ ದೊರೆಯುವ ವರಮಾನವನ್ನು ಸಮನಾಗಿ ಸಮಾಜದಲ್ಲಿನ ಎಲ್ಲಾ ವರ್ಗಗಳಲ್ಲೂ ಹಂಚಲಾಗದೇ, ಬಡವ-ಶ್ರೀಮಂತನ ನಡುವಿನ ಅಂತರವನ್ನು ಹೆಚ್ಚಿಸುತ್ತಲೇ ಇದ್ದು, ಈ ದಲಿತರನ್ನು ಎಂದೆಂದೂ ಸಮಾಜದ ಮುಖ್ಯವಾಹಿನಿಯಲ್ಲಿ ಸೇರದಂತೆ ದೂರವಾಗಿಟ್ಟಿದೆ. ಗಾಂಧಿ, ಅಂಬೇಡ್ಕರ್ ನಾಡಿನಲ್ಲಿ, ಅವರ ಪ್ರಜೆಗಳಲ್ಲಿ ನಡೆಸುತ್ತಿರುವ ಈ ಪಕ್ಷಪಾತಕ್ಕೆ ಎಂದು ಕೊನೆ? ಬಹುಶಃ ಚೋಮನನ್ನು ಎಂದೆಂದೂ ಅಡಿಯಾಳಾಗೇ ಇಡುವ ಯೋಚನೆಯಿರುವಂತಿದೆ. ೭೦ ವರ್ಷಗಳ ಹಿಂದೆ ಕಾರಂತರು ಚಿತ್ರಿಸಿದ, ಈ ಪಾತ್ರ ನಮ್ಮ ಮನದಿಂದ ಮರೆಯಾಗದಂತೆ ಮಾಡುವ ಈ ಪದ್ಧತಿ, ನಮ್ಮ ರಾಷ್ಟ್ರಕ್ಕೆ ಎಂದೂ ಗೌರವ ತರುವ ಸಂಗತಿಯಲ್ಲ.

2 thoughts on “

    • Thanks Siri. I just now started this blog. Nalini Prasad advised me to publish my articles on this site. So this is the first of many I am going to write and publish my articles. Thanks for reading it. I would like you to read the original novel”Chomana Dudi” by our greatest Kannada author Dr. Shivaram Karanth when you find time. Now that you are in the capital of Kannada culture, you must start collecting the best of our literary works.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s